ನಿವೇದಿತ, ಸೋದರಿ

	1867-1911. ಭಾರತಕ್ಕೆ ಬಂದು ಭಾರತೀಯರ ಧರ್ಮ, ಆಧ್ಯಾತ್ಮಿಕ ಔನ್ನತ್ಯಗಳಿಗಾಗಿ ದುಡಿದ ಐರಿಷ್ ಮಹಿಳೆ. ಈಕೆಯ ಪೂರ್ವಾಶ್ರಮದ ಹೆಸರು ಮಾರ್ಗರೆಟ್ ಎಲಿಜಬೆತ್ ನೋಬಲ್ ಹುಟ್ಟಿದ್ದು ಐರ್ಲೆಂಡಿನಲ್ಲಿ. ತಂದೆ ಸ್ಯಾಮ್ಯುಯಲ್ ರಿಚ್ಮಂಡ್ ನೋಬಲ್; ತಾಯಿ ಮೇರಿ ಇಸಾಬೆಲ್. 17ನೆಯ ವಯಸ್ಸಿಗೆಲ್ಲ ವಿದ್ಯಾಭ್ಯಾಸ ಮುಗಿಸಿ ಕೆಸ್‍ವಿಕ್‍ನ ಶಾಲೆಯೊಂದರಲ್ಲಿ ಉಪಾಧ್ಯಾಯಿನಿಯಾದಳು. ಕಲೆ, ಸಾಹಿತ್ಯ, ಸಂಗೀತ ಧರ್ಮಶಾಸ್ತ್ರಗಳಲ್ಲಿ ಆಸಕ್ತಳಾದ ಈಕೆ ಶಿಕ್ಷಣದಲ್ಲಿ ನವವಿಧಾನವನ್ನು ಅಳವಡಿಸಲು ತಾನಿದ್ದ ಶಾಲೆಯನ್ನು ಬಿಟ್ಟು ವಿಂಬಲ್‍ಡನ್ ಶಾಲೆಯನ್ನು ಸೇರಿದಳು. ಅದನ್ನೂ ತೊರೆದು ತನ್ನದೇ ಆದ ರಸ್ಕಿನ್ ಶಾಲೆಯನ್ನು ತೆರೆದಳು. ಅಲ್ಲಿಗೆ ಬಂದ (1895) ಸ್ವಾಮಿ ವಿವೇಕಾನಂದರನ್ನು ಸಂದರ್ಶಿಸಿ ಅವರ ಬೋಧಪ್ರದವಾದ ಭಾಷಣಗಳನ್ನು ಕೇಳಿ ಮುಗ್ಧಳಾದ ಈಕೆ ಅವರ ಅಪ್ಪಣೆ ಪಡೆದು ತನ್ನ ಸೇವೆಯನ್ನು ಸಲ್ಲಿಸಲು ಭಾರತಕ್ಕೆ ಬಂದಳು (1898). ಅದೇ ವರ್ಷ ಮಾರ್ಚ್ 25ರಂದು ವಿವೇಕಾನಂದರಿಂದ ದೀಕ್ಷೆಪಡೆದು ನಿವೇದಿತಾ ಎಂಬ ಹೆಸರು ಪಡೆದಳೂ. ನಿವೇದಿತ ಭಾರತದಲ್ಲಿದ್ದಾಗ ತನ್ನ ದೇಶದ ಅಭಿಮಾನವನ್ನು ಪೂರ್ಣವಾಗಿ ಕಳೆದುಕೊಂಡು ಭಾರತವನ್ನು ತನ್ನ ದೇಶದಂತೆಯೇ ಪ್ರೀತಿಸಿದಳು. ಭಾರತೀಯರ ಕಲ್ಯಾಣದಲ್ಲಿ ಅತೀವ ಆಸಕ್ತಿ ತಳೆದಳೂ. ಈಗ ನಿವೇದಿತಾ ಗಲ್ರ್ಸ್ ಸ್ಕೂಲ್ ಎಂದು ಕಲ್ಕತ್ತದಲ್ಲಿ ಪ್ರಸಿದ್ಧವಾಗಿರುವ ಹೆಣ್ಣುಮಕ್ಕಳ ಶಾಲೆಯನ್ನು ಸ್ಥಾಪಿಸಿ ಸ್ತ್ರೀವಿದ್ಯಾಭ್ಯಾಸಕ್ಕೆ ಅಡಿಗಲ್ಲು ಹಾಕಿದಳು. ತಾನು ಆರಂಭಿಸಿದ (ನವೆಂಬರ್ 1898) ಹುಡುಗಿಯರ ಶಾಲೆಯನ್ನು ನಡೆಸುವಲ್ಲಿ ಹಣದ ಕೊರತೆ ಕಂಡಾಗ, ಲಂಡನ್, ಫ್ರಾನ್ಸ್, ಸ್ಕಾಟ್ಲೆಂಡ್ ಮತ್ತು ಅಮೆರಿಕ ದೇಶಗಳಲ್ಲಿ ಉಪನ್ಯಾಸಗಳಿತ್ತು ಧನ ಸಂಗ್ರಹಿಸಿದಳು. ಭಾರತೀಯರ ನಂಬಿಕೆ, ದೇವರು, ಆಚಾರವಿಚಾರ, ಸ್ಥಿತಿಗತಿ, ಹೆಗ್ಗಳಿಕೆಗಳನ್ನು ಕುರಿತು ಪುಸ್ತಕಗಳನ್ನು ಬರೆದು ಪ್ರಕಟಿಸಿದಳು. ಈಕೆಗೆ ಸೋದರಿ ಕ್ರಿಸ್ಟನ್ ನೆರವಾದಳು. ಭಾರತೀಯರ ಪ್ರಮುಖ ಸಮಸ್ಯೆಯಾಗಿರುವ ಶಿಕ್ಷಣದ ಬಗೆಗೆ ಈಕೆ ಆಳವಾಗಿ ಚಿಂತಿಸಿ ಪ್ರಾಥಮಿಕ ಶಾಲೆಯಿಂದ ಹಿಡಿದು ಉಚ್ಚ ಶಿಕ್ಷಣದವರೆಗೆ ಶಿಕ್ಷಣ ಹೇಗಿರಬೇಕೆಂಬುದನ್ನು ಉಪನ್ಯಾಸ ಹಾಗೂ ಲೇಖನಗಳ ಮೂಲಕ ಜನತೆಯ ಮುಂದಿಟ್ಟಳು. ತನ್ನ ಪುಟ್ಟ ಶಾಲೆಯಲ್ಲಿ ತನ್ನೆಲ್ಲ ಯೋಜನೆಗಳನ್ನು ಜಾರಿಗೆ ತರಲು ಯತ್ನಿಸಿದಳು. ಆಗಿನ ಕಾಲದ ಪ್ರಸಿದ್ಧ ವ್ಯಕ್ತಿಗಳನ್ನೆಲ್ಲ ತನ್ನ ಕಡೆಗೆ ಆಕರ್ಷಿಸಿ ಅವರಲ್ಲಿ ದೇಶಭಕ್ತಿಯನ್ನೂ ಭಾರತೀಯ ಸಂಸ್ಕøತಿ-ಕಲೆಗಳಲ್ಲಿ ಆಸಕ್ತಿಯನ್ನೂ ಉಂಟುಮಾಡಿದಳು. ಪ್ರಸಿದ್ಧ ವಿಜ್ಞಾನಿ ಜಗದೀಶಚಂದ್ರ ಬೋಸ್, ಇತಿಹಾಸ ಲೇಖಕ ಜದುನಾಥ ಸರ್ಕಾರ್, ಕವಿ ರವೀಂದ್ರನಾಥ ಠಾಕೂರ್, ದೇಶಭಕ್ತ ಬಿಪಿನ್ ಚಂದ್ರಪಾಲ್, ಕಲಾಕುಶಲಿ ಅಬನೀಂದ್ರನಾಥ ಠಾಕೂರ್ ಮೊದಲಾದವರು ನಿವೇದಿತಳಿಂದ ಅಪಾರ ಸ್ಫೂರ್ತಿ ಪಡೆದರು.

	ಈಕೆ ಬರೆದಿರುವ ಪ್ರಸಿದ್ಧ ಇಂಗ್ಲಿಷ್ ಗ್ರಂಥಗಳಲ್ಲಿ ಇವು ಕೆಲವು: ದಿ ಮಾಸ್ಟರ್ ಆ್ಯಸ್ ಐ ಸಾ ಹಿಮ್; ದಿ ವೆಬ್ ಆಫ್ ಇಂಡಿಯನ್ ಲೈಫ್, ಫುಟ್ ಫಾಲ್ಸ್ ಆಫ್ ಇಂಡಿಯನ್ ಹಿಸ್ಟರಿ; ಕ್ರೇಡಲ್ ಟೇಲ್ಸ್ ಆಫ್ ಹಿಂದೂಯಿಸಮ್; ರಿಲಿಜನ್ ಅಂಡ್ ಧರ್ಮ, ಸ್ಟಡೀಸ್ ಆಫ್ ಈಸ್ಟರನ್ ಹೋಮ್, ಕಾಳಿ, ದಿ ಮದರ್.

	ಒಮ್ಮೆ ಈಕೆ ಡಾರ್ಜಿಲಿಂಗಿಗೆ ಪ್ರವಾಸ ಹೋದ ಸಮಯದಲ್ಲಿ (1911) ಮರಣಾಂತಿಕ ರಕ್ತ ಭೇದಿಗೆ ಗುರಿಯಾಗಿ ಅಕ್ಟೋಬರ್ 13ರಂದು ನಿಧನಳಾದಳು. ಸಾಯುವ ಮುನ್ನ ತನ್ನ ಸರ್ವಸ್ವವನ್ನೂ ಬೇಲೂರು ಮಠಕ್ಕೆ ಅರ್ಪಿಸಿ ಅದನ್ನು ಶಾಲೆಗಾಗಿ ವಿನಿಯೋಗಿಸುವಂತೆ ಸೂಚಿಸಿದಳು. 1967ರಲ್ಲಿ ಈಕೆಯ ಎಲ್ಲ ಕೃತಿಗಳನ್ನೂ ನಾಲ್ಕು ಸಂಪುಟಗಳಲ್ಲಿ ಕಲ್ಕತ್ತದ ರಾಮಕೃಷ್ಣ ಶಾರದ ಮಿಷನ್ ಸಿಸ್ಟರ್ ನಿವೇದಿತ ಗಲ್ರ್ಸ್ ಸ್ಕೂಲ್‍ನವರು ಪ್ರಕಟಿಸಿದ್ದಾರೆ. 1966ರ ಅಕ್ಟೋಬರ್ ನಲ್ಲಿ ಈಕೆಯ ಜನ್ಮಶತಾಬ್ದಿ ಸ್ಮರಣಸಂಚಿಕೆ ಪ್ರಕಟಗೊಂಡಿದೆ.									
(ಎಸ್.ಡಬ್ಲ್ಯೂ.ಎ.; ಪಿ.ಎಚ್.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ